ಟೋಬಿ ಕಲ್ಪನೆಗೂ ನಿಲುಕದ ವ್ಯಕ್ತಿಯ ರಕ್ತಚರಿತ್ರೆ 3.5/5 ****
Posted date: 25 Fri, Aug 2023 10:05:45 PM
ಟೋಬಿ ವಿಲಕ್ಷಣ ವ್ಯಕ್ತಿತ್ವದ ಮನುಷ್ಯನೊಬ್ಬನ ಕಥೆ, ಸಮಾಜದಲ್ಲಿ ಕೆಲವರು ಇರುವುದೇ ಹಾಗೆ, ಅಂಥವರಲ್ಲಿ ಬದಲಾವಣೆ ತರುವುದು ಅಸಾಧ್ಯ. ಟೋಬಿ ಆ ಸಾಲಿಗೆ ಸೇರಿದ ವ್ಯಕ್ತಿ. ಭಾವನೆಗಳೇ ಇಲ್ಲದ ಇಂಥವನೊಬ್ಬನ ಕಣ್ಣಲ್ಲೂ ಕಂಬನಿ ಹರಿಯುತ್ತದೆ, ರೋಷ ಉಕ್ಕಿ, ಸೇಡಿನ ಜ್ವಾಲಾಮುಖಿ ಸ್ಟೋಟಿಸುತ್ತದೆ. ಇದಕ್ಕೆ ಕಾರಣವಾದ ವ್ಯವಸ್ಥೆಯನ್ನ ಟೋಬಿ ಚಿತ್ರ ಬಿಡಿಸುತ್ತ ಹೋಗುತ್ತದೆ.      
 
`ಹರಕೆಯ ಕುರಿ ಕಾಣೆಯಾಗಿದೆ` ಊರ ಜಾತ್ರೆಯ ಸಮಯದಲ್ಲಿ ದೈವದ ಪೂಜಾರಿ ಹೇಳುವ ಮಾತಿನೊಂದಿಗೆ  ಟೋಬಿ ಚಿತ್ರ ಆರಂಭವಾಗುತ್ತದೆ. ಆ ಕುರಿ ಮತ್ತೆ ಹಿಂದಿರುಗಿ ಬರಬಾರದು, ಹಾಗೇನಾದರೂ ಬಂದರೆ, ಅದು ಮಾರಿಯಾಗಿರುತ್ತದೆ ಎಂದು  ಪೂಜಾರಿಯ ಮೂಲಕ ದೈವ ಹೇಳುತ್ತದೆ. ಆ ಹರಕೆಯ ಕುರಿ ಯಾರು, ಅದು ಬಂದರೆ ಯಾಕೆ ಮಾರಿಯಾಗಿರುತ್ತದೆ ಎಂಬುದನ್ನು  ಬಿಡಿಸುತ್ತ ಹೋಗುವುದೇ ಟೋಬಿಯ ಕಥಾಹಂದರ. ರೋಷ, ಆವೇಶ ತುಂಬಿರುವ ಅನಾಥ ಹುಡುಗನೊಬ್ಬನನ್ನು ರಿಮ್ಯಾಂಡ್ ಹೋಮ್‌ನಲ್ಲಿ ಕಂಡ ಪಾದ್ರಿಯೊಬ್ಬರು ಆತನಿಗೆ ಟೋಬಿ ಎಂಬ ಹೆಸರಿಟ್ಟು  ಪ್ರೀತಿಯಿಂದ ಆಲಂಗಿಸಿ ರಮಿಸುತ್ತಾರೆ. ಆ ಟೋಬಿ ಮುಂದೆ ಜೈಲುವಾಸ ಮುಗಿಸಿ ಹೊರಬಂದ ಮೇಲೆ ಪಾದ್ರಿಯನ್ನು ಹುಡುಕಿಕೊಂಡು ಚರ್ಚ್‌ಗೆ ಬರುತ್ತಾನೆ. ಅದೇ ಸಮಯದಲ್ಲಿ ರೌಡಿಯ ಹಿಡಿತದಲ್ಲಿದ್ದ ಪಾದ್ರಿಯ ಜೀವವನ್ನು ಉಳಿಸುತ್ತಾನೆ. ಮುಂದೆ ಶವಾಗಾರದಲ್ಲಿ ಹೆಣ ಕುಯ್ಯುವ ವ್ಯಕ್ತಿಯೊಬ್ಬ ಆತನಿಗೆ ಸ್ನೇಹಿತನಾಗುತ್ತಾನೆ. ನಂತರ ಕಾಡಲ್ಲಿ ಯಾರೋ ಬಿಟ್ಟುಹೋಗಿದ್ದ ಅನಾಥ ಹೆಣ್ಣುಮಗುವನ್ನು ತಂದು ಸಾಕುತ್ತಾನೆ. ಆ ಊರಲ್ಲಿ  ವೇಶ್ಯಾವೃತ್ತಿ‌  ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿತ್ರಿ  ಟೋಬಿಯ ಜೀವನದಲ್ಲಿ ಸ್ನೇಹಿತೆಯಾಗಿ ಎಂಟ್ರಿ ಕೊಡುತ್ತಾಳೆ, ಟೋಬಿ ಸಾಕಿದ ಮಗು ಜನ್ನಿ, ಮುಂದೆ ದೊಡ್ಡವಳಾದ ಮೇಲೆ, ಜನರ ಮಾತಿನಿಂದ ಆಕೆಗಾಗಿ ಒಂದು ಮನೆಕಟ್ಟಲು ಮುಂದಾಗುತ್ತಾನೆ. ಮನೆಗೆ ಹಣ ಹೊಂದಿಸಲು ಹೋಗಿ, ಯಾರೋ ಹೇಳಿದರೆಂದು ನಡು ರಸ್ತೆಯಲ್ಲೇ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ಜೈಲು ಸೇರುತ್ತಾನೆ, ಮಗಳು ಜನ್ನಿ, ಟೋಬಿಯನ್ನು ಜೈಲಿಂದ ಬಿಡಿಸಲು ತನ್ನ ಶೀಲವನ್ನೇ ಮಾರಿಕೊಳ್ಳುತ್ತಾಳೆ, ಹೀಗೆ  ಉಳ್ಳವರಿಗೆ ಹರಕೆಯ ಕುರಿಯಾಗುವ ಟೋಬಿಯ ಜೀವನ ಯಾವ ರೀತಿ ಛಿದ್ರ ಛಿದ್ರವಾಗಿ ಹೋಯಿತು  ಎಂಬುದನ್ನು ನಿರ್ದೇಶಕ ಬಾಸಿಲ್ ಕಣ್ಣಿಗೆ ಕಟ್ಟುವ ಹಾಗೆ ತೆರೆಯಮೇಲೆ ಮೂಡಿಸಿದ್ದಾರೆ. ಇಲ್ಲಿ ಟೋಬಿ ಆಗಿ ರಾಜ್ ಬಿ. ಶೆಟ್ಟಿ ತೆರೆಯಮೇಲೆ ವಿಜೃಂಭಿಸಿದ್ದಾರೆ. ಶವಾಗಾರದಲ್ಲಿ ಹೆಣ ಕುಯ್ಯುವಾಗಲು ನಗುನಗುತ್ತಲೇ, ದೇಹ ಸೀಳುವುದು ಆತನ ವಿಲಕ್ಷಣ ವ್ಯಕ್ತಿತ್ವಕ್ಕೆ ಒಂದು ಉದಾಹರಣೆ. ಚಿತ್ರದಲ್ಲಿ   ಆಕ್ಷನ್  ಸೀನ್ ಗಳನ್ನು ಪ್ರಸೆಂಟ್ ಮಾಡಿರುವ ಶೈಲಿ  ಚೆನ್ನಾಗಿದೆ. ತಂದೆ-ಮಗಳ ನಡುವಿನ ಭಾವನಾತ್ಮಕ ಸನ್ನಿವೇಶಗಳು ನೋಡುಗರ ಕಣ್ಣನ್ನು ಒದ್ದೆಯಾಗಿಸುತ್ತವೆ. ಟೋಬಿ ಮಗಳಾಗಿ ಚೈತ್ರ ಜೆ.ಆಚಾರ್ ಅದ್ಭುತವಾದ ನಟನೆ ಚಿತ್ರದ ಹೈಲೈಟ್‌ಗಳಲ್ಲೊಂದು, ಭಾವನಾತ್ಮಕ ಸನ್ನಿವೇಶಗಳಲ್ಲಿ, ಜೊತೆಗೆ ಗಯ್ಯಾಳಿಯಾಗಿಯೂ ಅವರು ಅತ್ಯುತ್ತಮ ಅಭಿನಯ ನೀಡಿದ್ದಾರೆ. ಖಳನಟ ರಾಜ್‌ದೀಪಕ್ ಶೆಟ್ಟಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವೇಶ್ಯೆಯ ಪಾತ್ರ ಮಾಡಿರುವ  ಸಂಯುಕ್ತ ಹೊರನಾಡು ಕಣ್ಣಲೇ ಹೆಚ್ಚು ಮಾತನಾಡುತ್ತಾರೆ. ಕೊನೆಯ ೩೦ ನಿಮಿಷಗಳ ಕ್ಲೈಮ್ಯಾಕ್ಸ್ ದೃಶ್ಯ ಇಡೀ ಸಿನಿಮಾದ ಜೀವಾಳ ಎನ್ನಬಹುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed